ಟೀಸೇಲಿಯಸ್, ಆರ್ನೆ ವಿಲ್‍ಹೆಲ್ಮ್ ಕಾರಿನ್
1902-1971. ಸ್ವೀಡನ್ ಸಂಜಾತ ರಸಾಯನ ವಿಜ್ಞಾನಿ. 1902ರ ಆಗಸ್ಟ್ 10ರಂದು ಸ್ಟಾಕ್ ಹೋಮಿನಲ್ಲಿ ಜನನ. ವಿದ್ಯುತ್ಕಣ ಸಂಚಲನೆ (ಎಲೆಕ್ಟ್ರೊಫಾರೆಸಿಸ್) ಮತ್ತು ಅಧಿಶೋಷಣ ವಿಶ್ಲೇಷಣೆಗಳನ್ನು (ಅಡ್ಸಾಪ್ರ್ಷನ್ ಅನ್ಯಾಲಿಸಿಸ್) ಕುರಿತು ಈತ ನಡೆಸಿದ ವ್ಯಾಪಕ ಸಂಶೋಧನೆಗಳಿಗಾಗಿ, ಅವುಗಳಲ್ಲೂ ಸೀರಮ್ ಪ್ರೋಟೀನುಗಳ ಸಂಕೀರ್ಣತೆಗೆ ಸಂಬಂಧಿಸಿದ ಆವಿಷ್ಕಾರಗಳಿಗಾಗಿ, 1948ರಲ್ಲಿ ಈತನಿಗೆ ರಸಾಯನ ಶಾಸ್ತ್ರ ವಿಭಾಗದ ನೊಬೆಲ್ ಪಾರಿತೋಷಿಕ ನೀಡಿ ಗೌರವಿಸಲಾಯಿತು. ಬಾಲ್ಯದ ವಿದ್ಯಾಭ್ಯಾಸ ಗೊಥೆನ್‍ಬರ್ಗಿನಲ್ಲಿ. ಪ್ರೌಢ ಶಿಕ್ಷಣ ಉಪ್ಸಾಲ ವಿಶ್ವವಿದ್ಯಾಲಯದಲ್ಲಿ. ರಸಾಯನಶಾಸ್ತ್ರದ ಪರಿಚಯವಾಗಿ ಅದರಲ್ಲಿ ಆಸಕ್ತಿ ಕೆರಳಿ ಡಾಕ್ಟರೇಟ್ ಪದವಿ ಪಡೆದದ್ದು (1930) ಅಲ್ಲಿಯೇ. ಉಪ್ಸಾಲದಲ್ಲಿ ಭೌತ ರಾಸಾಯನಿಕ ಸಂಶೋಧನೆಗಳಿಗಾಗಿಯೇ ಮೀಸಲಾಗಿದ್ದ ಸಂಸ್ಥೆಯೊಂದಿತ್ತು. ಅಲ್ಲಿ ಪ್ರಾಧ್ಯಾಪಕನಾಗಿದ್ದ ಟಿ. ಸ್ವೆಡ್‍ಬರ್ಗ್ ಎಂಬಾತ ಟೀಸೇಲಿಯಸನ ಪ್ರತಿಭೆಯನ್ನು ಗುರುತಿಸಿ ಈತನನ್ನು ತನ್ನ ಸಹಾಯಕನಾಗಿ ನೇಮಿಸಿಕೊಂಡ (1925-32). ತದನಂತರ ಈತನಿಗೆ ಅಲ್ಲಿಯೇ ರಸಾಯನಶಾಸ್ತ್ರ ಉಪನ್ಯಾಸಕನ ಹುದ್ದೆ ಸಿಕ್ಕಿತು. 1930ರಿಂದ ಸುಮಾರು ಎಂಟು ವರ್ಷಗಳ ಕಾಲ ಅಧ್ಯಾಪನ ವೃತ್ತಿ. ಏತನ್ಮಧ್ಯೆ ಎರಡು ವರ್ಷ (1934-35) ಪ್ರಿನ್ಸ್‍ಟನ್ ವಿಶ್ವವಿದ್ಯಾಲಯದಲ್ಲಿ ಪ್ರೌಢ ವ್ಯಾಸಂಗ ನಡೆಸಿ 1937ರಲ್ಲಿ ಸ್ವದೇಶಕ್ಕೆ ಹಿಂತಿರುಗಿದಾಗ ಇವನ ಸಲುವಾಗಿಯೆ ಉಪ್ಸಾಲ ವಿಶ್ವವಿದ್ಯಾಲಯ ಜೀವರಸಾಯನಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕನ ಪೀಠವನ್ನು ನಿರ್ಮಿಸಿದ್ದಲ್ಲದೆ ಆ ವಿಭಾಗಕ್ಕಾಗಿ ಪ್ರತ್ಯೇಕ ಕಟ್ಟಡವೊಂದನ್ನು ಕೂಡ ಒದಗಿಸಿತು. ಸ್ವೀಡನ್ನಿನ ಪ್ರಕೃತಿವಿಜ್ಞಾನ ಸಂಘದ ಅಧ್ಯಕ್ಷನಾಗಿ (1946-50) ಮತ್ತು ನೊಬೆಲ್ ದತ್ತಿ ಸಂಸ್ಥೆಯ ಉಪಾಧ್ಯಕ್ಷನಾಗಿ (1947) ಈತ ಸೇವೆ ಸಲ್ಲಿಸಿದ್ದಾನೆ.
ಆರೋಪಿತ ವಿದ್ಯುತ್ ಕ್ಷೇತ್ರದಲ್ಲಿ ಕಲಿಲ ಕಣಗಳು ತಾವು ಹೊತ್ತಿರುವ ವಿದ್ಯುದಾವೇಶಕ್ಕೆ ಅನುಗುಣವಾಗಿ ಎಲೆಕ್ಟ್ರೋಡುಗಳ ಕಡೆಗೆ ಧಾವಿಸುತ್ತವೆ. ಧನವಿದ್ಯುದಾವಿಷ್ಟ ಕಣಗಳಾದರೆ ಕ್ಯಾಥೋಡಿನ ಕಡೆಗೂ ಋಣವಿದ್ಯುದಾವಿಷ್ಟ ಕಣಗಳಾದರೆ ಆನೋಡಿನ ಕಡೆಗೂ ಆಕರ್ಷಿಸಲ್ಪಡುತ್ತವೆ. ಈ ವಿದ್ಯಮಾನಕ್ಕೆ ವಿದ್ಯುತ್ಕಣ ಸಂಚಲನೆ ಎಂದು ಹೆಸರು. ಪದಾರ್ಥಗಳ ರಾಸಾಯನಿಕ ರಚನೆಯಲ್ಲಿ ಅತ್ಯಲ್ಪ ವ್ಯತ್ಯಾಸವಿದ್ದರೂ ಸಾಕು, ಈ ತಂತ್ರವನ್ನು ಬಳಸಿ ಅವನ್ನು ಪ್ರತ್ಯೇಕಿಸಲು ಸಾಧ್ಯ ಎಂದು ಟೇಸೇಲಿಯಸ್ ತೋರಿಸಿದ್ದಾನೆ. ಈ ತತ್ತ್ವದ ಅನ್ವಯದಿಂದ ಸಂಕೀರ್ಣ ಪದಾರ್ಥಗಳನ್ನು ಬೇರ್ಪಡಿಸಬಹುದಲ್ಲದೆ ಒಂದು ಪದಾರ್ಥದಲ್ಲಿರುವ ಅಶುದ್ಧತೆಗಳನ್ನು (ಅವುಗಳ ಪರಿಮಾಣ ಅತಿ ಕಡಿಮೆ ಹಾಗಿದ್ದರೂ) ಗುರುತಿಸಬಹುದು. ಸಹಜವಾದ ಮತ್ತು ರೋಗಗ್ರಸ್ತ ಸೀರಮುಗಳ ಅಧ್ಯಯನಕ್ಕೆ ಈ ವಿಧಾನ ಬಲು ಪ್ರಶಸ್ತ. ಟೀಸೇಲಿಯಸ್‍ನ ಸಂಶೋಧನೆಗಳ ಫಲವಾಗಿ ಕ್ರೊಮಟಾಗ್ರಫಿ ಮತ್ತು ಅಧಿಶೋಷಣ ವಿಶ್ಲೇಷಣಾ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಉಂಟಾಗಿದೆ.
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ